ಬಾದಾಮಿ 1

ಭಾರತದ ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಒಂದು ತಾಲ್ಲೂಕು. ಈ ತಾಲ್ಲೂಕಿನ ಉತ್ತರದಲ್ಲಿ ಬಾಗಲಕೋಟೆ, ವಾಯವ್ಯದಲ್ಲಿ ಮುಧೋಳ, ಪೂರ್ವದಲ್ಲಿ ಹುನಗುಂದ ಮತ್ತು ರಾಯಚೂರು ಜಿಲ್ಲೆಯ ಕುಷ್ಟಗಿ, ಪಶ್ಚಿಮದಲ್ಲಿ ಬೆಳಗಾಂವಿ ಜಿಲ್ಲೆಯ ರಾಮದುರ್ಗ, ದಕ್ಷಿಣದಲ್ಲಿ ಧಾರವಾಡ ಜಿಲ್ಲೆಯ ನರಗುಂದ ಮತ್ತು ರೋಣ ತಾಲ್ಲೂಕುಗಳಿವೆ. ಬಿಜಾಪುರ ಜಿಲ್ಲೆಯ ಅತ್ಯಂತ ದಕ್ಷಿಣಕ್ಕಿದ್ದು, ಬಾಗಲಕೋಟೆ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕಿನಲ್ಲಿ 3 ಪಟ್ಟಣಗಳೂ 156 ಗ್ರಾಮಗಳೂ ಇವೆ. ಬಾದಾಮಿ ಗುಳೇದಗುಡ್ಡ (33,991), ಕೆರೂರು (17,206) ಇವು ಪಟ್ಟಣಗಳು. ಕುಲಗೇರಿ, ಬಾದಾಮಿ, ಕೆರೂರು, ಗುಳೇದಗುಡ್ಡ ಇವು ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ 1,406 ಚಕಿಮೀ. ಜನಸಂಖ್ಯೆ 2,91,919 (2001).

ತಾಲ್ಲೂಕಿನಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ಗುಂಪುಗಳಿಗೆ ಸೇರಿದ ಮರಳು ಶಿಲೆಯ ಬೆಟ್ಟಗಳಿವೆ. ತಾಲ್ಲೂಕಿನ ಮುಖ್ಯ ನದಿ ಮಲಪ್ರಭಾ. ಇದು ತಾಲ್ಲೂಕಿನ ದಕ್ಷಿಣದ ಗಡಿಯ ಬಳಿ ಹರಿದು, ಆಗ್ನೇಯದಲ್ಲಿ ತಾಲ್ಲೂಕಿನ ಒಳಭಾಗದಲ್ಲಿ ಮುಂದುವರಿದು, ಪೂರ್ವದಲ್ಲಿ ಮತ್ತೆ ಗಡಿಯಾಗಿ ಪರಿಣಮಿಸಿ ಅನಂತರ ಹುನಗುಂದ ತಾಲ್ಲೂಕಿನಲ್ಲಿ ಸಾಗುತ್ತದೆ. ಮರಳು ಮಿಶ್ರವಾದ ಕೆಂಪುಮಣ್ಣು ಇದೆ. ಬಿಜಾಪುರ ತಾಲ್ಲೂಕಿನಲ್ಲಿ ಬಾಗಲಕೋಟೆಯ ಅನಂತರ ಇದೇ ಅತ್ಯಂತ ಉಷ್ಣತೆಯ ತಾಲ್ಲೂಕು. ವಾರ್ಷಿಕ ಸರಾಸರಿ ಮಳೆ 623 ಮಿಮೀ. 

ಬಾದಾಮಿ ತಾಲ್ಲೂಕಿನ 31,264.28 ಹೆಕ್ಟೇರ್ ಭೂಮಿ ಅರಣ್ಯಗಳಿಂದ ಕೂಡಿದೆ. ಬೇಸಾಯದ ನೆಲ 91608.17 ಹೆಕ್ಟೇರ್ (1963-64). ಮಳೆಯೇ ಬೇಸಾಯಕ್ಕೆ ಮುಖ್ಯ ಆಧಾರ. ಕೆರೆ, ಬಾವಿ ಮುಂತಾದವು ಸ್ವಲ್ಪಮಟ್ಟಿಗೆ ನೀರಾವರಿ ಸೌಲಭ್ಯ ಒದಗಿಸಿವೆ. ತಾಲ್ಲೂಕಿನ ಮುಖ್ಯ ಬೆಳೆಗಳು ಜೋಳ ಮತ್ತು ಸಜ್ಜೆ. ಇತರ ಬೆಳೆಗಳು ಹತ್ತಿ, ಗೋದಿ ಮತ್ತು ಬೇಳೆ ಕಾಳುಗಳು. ನೆಲಗಡಲೆ ಎಣ್ಣೆಯ ಗಿರಣಿಗಳಿವೆ. ಸುಣ್ಣ ತಯಾರಿಕೆಯಾಗುತ್ತದೆ.

ತಾಲ್ಲೂಕಿನ ನಡುವೆ ದಕ್ಷಿಣದಿಂದ ಉತ್ತರಕ್ಕೆ ಹುಬ್ಬಳ್ಳಿ-ಸೊಲ್ಲಾಪುರ ರೈಲುಮಾರ್ಗ ಹಾದುಹೋಗುತ್ತದೆ. ಬಾದಾಮಿ-ಗುಳೇದಗುಡ್ಡ-ಶಿರೂರು, ಬಾದಾಮಿ-ರಾಮದುರ್ಗ, ರೋಣ-ಬಾದಾಮಿ-ಬಾಗಲಕೋಟೆ, ಹುಬ್ಬಳ್ಳಿ-ಕೆರೂರು-ಅನಗವಾಡಿ ರಸ್ತೆಗಳು ಮುಖ್ಯವಾದುವು.

ತಾಲ್ಲೂಕಿನ ಮುಖ್ಯ ಸ್ಥಳ ಬಾದಾಮಿ. ಇದು ಹುಬ್ಬಳ್ಳಿ-ಸೊಲ್ಲಾಪುರ ರೈಲುಮಾರ್ಗದ ಬಾದಾಮಿ ನಿಲ್ದಾಣದಿಂದ ಸುಮಾರು 5 ಕಿಮೀ. ದೂರದಲ್ಲಿ, ಬಿಜಾಪುರದಿಂದ 113 ಕಿಮೀ ದಕ್ಷಿಣಕ್ಕೆ ಉ.ಅ. 115053 ಮತ್ತು ಪೂ.ರೇ. 35045 ಮೇಲೆ, ಸಮುದ್ರ ಮಟ್ಟದಿಂದ ಸುಮಾರು 581 ಮೀ ಎತ್ತರದಲ್ಲಿದೆ. ಈ ಪಟ್ಟಣದ ಜನಸಂಖ್ಯೆ 25,851 (2001).

ಎರಡು ಮರಳು ಕಲ್ಲುಗುಡ್ಡಗಳ ಶ್ರೇಣಿಗಳ ನಡುವೆ ಅತ್ಯಂತ ಆಕರ್ಷಕ ನಿವೇಶನದಲ್ಲಿ ಅಗಸ್ತ್ಯ ಸರೋವರವೆಂಬ ದೊಡ್ಡ ಕೆರೆಯ ಪಶ್ಚಿಮದಲ್ಲಿರುವ ಈ ಪಟ್ಟಣದ ಇತಿಹಾಸ ಬಹುಪ್ರಾಚೀನವಾದ್ದು.
ದಕ್ಷಿಣ ಗುಡ್ಡದ ಏರಿಯ ಉತ್ತರ ಬದಿಯಲ್ಲಿ ಸರೋವರಕ್ಕೆ ಅಭಿಮುಖವಾಗಿ ಪ್ರಸಿದ್ಧವಾದ ಗುಹಾಂತರ್ದೇವಾಲಯಗಳಿವೆ. ಸರೋವರದ ಪೂರ್ವಕ್ಕೆ ಮತ್ತು ದಕ್ಷಿಣಕ್ಕೆ ಹಾಗೂ ಊರಿನಲ್ಲಿ ಕೆಲವು ದ್ರಾವಿಡ ಶೈಲಿಯ ದೇವಾಲಯಗಳಿವೆ. ಅವುಗಳಲ್ಲಿ ಮಾಲಗಿತ್ತಿ ಶಿವಾಲಯ, ಜಂಬುಲಿಂಗ, ವಿರೂಪಾಕ್ಷ, ದತ್ತಾತ್ರೇಯ, ಮಲ್ಲಿಕಾರ್ಜುನ, ಲಕುಲೇಶ, ಕೋಷ್ಟರಾಯ, ಅನಂತಶಯನ ಅಲ್ಲದೆ ಭೂತನಾಥ ಗುಡಿಗಳು ಮುಖ್ಯವಾದುವು. ಬಹು ಪ್ರಾಚೀನ ಕಾಲದಿಂದಲೂ ಇದು ಪ್ರಸಿದ್ಧವಾಗಿತ್ತು. ಸ್ಥಲಮಹಾತ್ಮ್ಯದಲ್ಲಿ (ಮಹಾಕೂಟ ಮಹಾತ್ಮ್ಯ) ಇದನ್ನು ವಾತಾಪಿಯೆಂದು ಕರೆದಿದೆ. ಇಲ್ಲಿ ವಾತಾಪಿಯೆಂಬ ರಾಕ್ಷಸ ವಾಸಿಸುತ್ತಿದ್ದನೆಂದೂ ಹೇಳಿದೆ. ಅವನ ತಮ್ಮನಾದ ಇಲ್ವಲ ಐಹೊಳೆಯಲ್ಲಿದ್ದನೆಂಬ ಐತಿಹ್ಯವೂ ಉಂಟು. ಅಗಸ್ತ್ಯ ಋಷಿ ಈ ರಾಕ್ಷಸರಿಂದ ಜನರಿಗಾಗುತ್ತಿದ್ದ ಪೀಡೆಯನ್ನು ತಪ್ಪಿಸಲು ತನ್ನ ಆಶ್ರಮಕ್ಕೆ ಇವರಿಬ್ಬರನ್ನೂ ಭೊಜನಕ್ಕೆ ಆಮಂತ್ರಿಸಿ ಯುಕ್ತಿಯಿಂದ ಅವರನ್ನು ಸಂಹರಿಸಿದನೆಂದೂ ಇವರ ಹೆಸರಿನಿಂದಲೇ ವಾತಾಪಿ, ಐಹೊಳೆಗಳು ಪ್ರಸಿದ್ಧಿ ಪಡೆದವೆಂದು ಹೇಳಿದೆ. ಚಾಲುಕ್ಯರ ಕಾಲಕ್ಕೆ ಹಿಂದೆ ಬಹುಶಃ ಇದೊಂದು ಪ್ರಸಿದ್ಧ ವ್ಯಾಪಾರ ಸ್ಥಳವಾಗಿತ್ತು. ಗರೀಕ್ ಭೂಗೋಳಕಾರ ಟಾಲಮಿ (ಸು.150) ಬಾದಾಮಿಯ ಹೆಸರನ್ನೂ ಉಲ್ಲೇಖಿಸಿದ್ದಾನೆ. ಬಾದಾಮಿಯ ಪ್ರಾಚೀನತೆಗೆ ಆಧಾರವಾಗಿ ಈ ಎಡೆಯಲ್ಲಿ ಕ್ರಿ.ಪೂ. 3ನೆಯ ಶತಮಾನದ ಸುಮಾರಿನ ಇತಿಹಾಸದ ಪ್ರಾರಂಭಕಾಲದ ಮಣ್ಣಿನ ಮಡಕೆಯ ಚೂರುಗಳು, ಸುಮಾರು ಇದೇ ಕಾಲದ ಅಥವಾ ಸ್ವಲ್ಪ ಈಚೆಗಿನ ಕಾಲದ ಕಟ್ಟಡಗಳ ಅವಶೇಷಗಳು ದೊರಕಿವೆ. ಚಾಲುಕ್ಯ ಚಕ್ರವರ್ತಿ 1ನೆಯ ಪುಲಕೇಶಿ ಇಲ್ಲಿ ಕೋಟೆ ಕಟ್ಟುವ ವೇಳೆಗೆ (543) ಬಹುಶಃ ಇದು ದೊಡ್ಡ ಪಟ್ಟಣವಾಗಿತ್ತು. ಅವನು ಇದನ್ನು ವಾತಾಪ್ಯಧಿಷ್ಠಾನವೆಂದು ಕರೆದಿದ್ದಾನೆ. ವಿಜಯನಗರದ ಮೊದಲನೆಯ ಹರಿಹರ 2,000 ಮಹಾಜನಗಳಿಗೆ ಬಾದಾಮಿಯನ್ನು ಕೊಟ್ಟು, ಉತ್ತರದ ಕಡೆಯ ಕೋಟೆಯನ್ನು ಕಟ್ಟಲು ಆಜ್ಞೆ ನೀಡಿದನೆಂದು 1339ರ ಒಂದು ಶಾಸನ ಹೇಳುತ್ತದೆ. ಕೃಷ್ಣದೇವರಾಯನ ಕಲದವರೆಗೂ ಇದು ವಿಜಯನಗರದ ಅಧೀನದಲ್ಲಿದ್ದು ಅನಂತರ ಆದಿಲ್‍ಶಾಹಿ ದೊರೆಗಳ ವಶವಾಯಿತು. ಇದನ್ನು ಪೇಶ್ವೆಗೆ ಕೊಡಬೇಕೆಂದು 1746ರಲ್ಲಿ ಸವಣೂರು ನವಾಬನಿಗೂ ಪೇಶ್ವೆಗೂ ಒಪ್ಪಂದವಾಗಿತ್ತು. 1756ರಲ್ಲಿ ಹೈದರಾಬಾದಿನ ನಿಜಾಮನೂ ಪೇಶ್ವೆಯೂ ಸವಣೂರಿನ ಮೇಲೆ ದಂಡೆತ್ತಿಬಂದರು. ಬಾದಾಮಿ ಪೇಶ್ವೆಗೆ ಸೇರಿತು. 1778ರಲ್ಲಿ ದಕ್ಷಿಣ ಬಿಜಾಪುರದ ಕೆಲವು ಪ್ರದೇಶಗಳೊಂದಿಗೆ ಬಾದಾಮಿಯೂ ಹೈದರನಿಗೆ ಸೇರಿತು. 1786ರಲ್ಲಿ ನಾನಾ ಫಡ್ನವೀಸ್ ಮತ್ತು ನಿಜಮನ ಸೈನ್ಯಗಳು ಮುತ್ತಿಗೆ ಹಾಕಿ ಇದನ್ನು ಗೆದ್ದುಕೊಂಡವು. 1818ರಲ್ಲಿ ಇದು ಬ್ರಿಟಿಷರ ಕೈ ಸೇರಿತ್ತು. 1840ರಲ್ಲಿ ನರಸಿಂಹ ದತ್ತಾತ್ರೇಯನೆಂಬವನು ಕೆಲವು ಅರಬರ ದಂಡಿನೊಂದಿಗೆ ಬಂದು ಬಾದಾಮಿಯನ್ನು ಲೂಟಿ ಮಾಡಿದನಲ್ಲದೆ ತಾನೇ ಅದರ ದೊರೆಯೆಂದು ಘೋಷಿಸಿಕೊಂಡ. ಬ್ರಿಟಿಷ್ ಸೈನ್ಯ ಆಕ್ರಮಣಕಾರರನ್ನು ಬಂಧಿಸಿತು. ಈಗ ಬಾದಾಮಿ ತನ್ನ ಹಳೆಯ ಪ್ರಾಶಸ್ತ್ಯವನ್ನು ಕಳೆದುಕೊಂಡಿದೆ. ಕೋಟೆಗಳೂ ದೇವಾಲಯಗಳೂ ಪಾಳುಬಿದ್ದಿವೆ.

ಬಾದಾಮಿಯ ಉತ್ತರದ ಮತ್ತು ದಕ್ಷಿಣದ ಬೆಟ್ಟಗಳ ಮೇಲೆ ಎರಡು ಕೋಟೆಗಳಿವೆ. ಉತ್ತರದ್ದು ಬಾವನ ಬಂಡೆಕೋಟೆ, ದಕ್ಷಿಣದ್ದು ರಣಮಂಡಲ ಕೋಟೆ. ಇವುಗಳ ನಡುವಣ ಅಂತರ ಸುಮಾರು 274 ಮೀ. ಕೋಟೆಗಳು ನೆಲದ ಮಟ್ಟದಿಂದ ಸುಮಾರು 73 ಮೀ ಎತ್ತರದಲ್ಲಿವೆ. ಮೇಲೆ ಗುಡ್ಡದ ಅಂಚಿನಲ್ಲಿ ಉದ್ದಕ್ಕೂ ಅಲ್ಲ್ಲಿ ಬಾವನಬಂಡೆ ಕೋಟೆಯ ಗೋಡೆಗಳು ಹಾಳಾಗಿವೆ. ಚಾಳುಕ್ಯರ ಕಾಲದವೆಂದು ಗುರುತಿಸಬಹುದಾದ ಕೋಟೆಯ ಭಾಗಗಳು ಉಳಿದು ಬಂದಂತಿಲ್ಲ. ರಾಷ್ಟ್ರಕೂಟರ, ವಿಜಯನಗರದ ಅರಸರ ಮತ್ತು ಟಿಪ್ಪುವಿನ ಕಾಲzಲ್ಲಿ ಕೋಟೆಯನ್ನು ವಿಸ್ತರಿಸಲಾಯಿತು. ದಕ್ಷಿಣ ಗುಡ್ಡದ ಮೇಲಿನ ಕೋಟೆ 18ನೆಯ ಶತಮಾನದ್ದು.

ದಕ್ಷಿಣ ಗುಡ್ಡದ ಕಡಿದಾದ ಉತ್ತರದ ಬದಿಯಲ್ಲಿ ನಾಲ್ಕು ಗುಹೆಗಳಿವೆ. ಇವುಗಳಲ್ಲಿ ವರ್ಣಚಿತ್ರಗಳಿವೆ. ಎರಡು ಪ್ರಾಗಿತಿಹಾಸ ಕಾಲದವು. ಇವು ಶಿಲಾಯುಗದ ಅಂತ್ಯದ ಕಾಲದವೆಂದು ಊಹಿಸಲಾಗಿದೆ. ಬಾದಾಮಿ ಆದಿಶಿಲಾ ಯುಗದ ಕಾಲದಿಂದಲೂ ಮಾನವನ ನೆಲೆಯಾಗಿತ್ತೆಂದು ಹೇಳಲು ಅನೇಕ ಆಧಾರಗಳು ದೊರಕಿವೆ. ಬಾದಾಮಿಯ ಚಾಲುಕ್ಯರ ಅನಂತರ ರಾಷ್ಟ್ರಕೂಟರ ಮತ್ತು ಕಲ್ಯಾಣ ಚಾಳುಕ್ಯರ ಕಾಲದ ಅವಶೇಷಗಳು ಇಲ್ಲಿ ಹೆಚ್ಚಾಗಿ ಸಿಕ್ಕಿಲ್ಲ. ಇದು ವಿದ್ಯಾಕೇಂದ್ರವಾಗಿತ್ತೆಂದು ರಾಷ್ಟ್ರಕೂಟ ಶಾಸನಗಳಲ್ಲಿ ಉಲ್ಲೇಖವಿದೆ. ಇಲ್ಲಿ ವಿಜಯನಗರದ ಬುಕ್ಕ ಹರಿಹರರಾಯರು ಹೊಸದಾಗಿ ಕೋಟೆಯನ್ನು ಕಟ್ಟಿಸಿ ಇಲ್ಲಿಂದ ಶತ್ರುಗಳನ್ನು ಜಯಿಸಿ ತಮ್ಮ ರಾಜ್ಯವನ್ನು ಬೆಳೆಸಿದರೆಂದು ಒಂದು ಶಾಸನದಿಂದ ಗೊತ್ತಾಗುತ್ತದೆ.

ಬಾದಾಮಿಯ ಸುತ್ತಮುತ್ತ ಹಲವಾರು ಕಿಲೋಮೀಟರ್‍ಗಳ ಅಂತರದಲ್ಲಿ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿವೆ. ಇಲ್ಲಿಂದ ಆಗ್ನೇಯ ದಿಕ್ಕಿಗೆ 46 ಕಿಮೀ ದೂರದಲ್ಲಿ ಐಹೊಳೆ ಹಾಗೂ 29 ಕಿಮೀ ದೂರದಲ್ಲಿ ಪಟ್ಟದಕಲ್ಲು ಇವೆ. ಇವೆರಡೂ ಪ್ರಾಚೀನ ವಿದ್ಯಾಕೇಂದ್ರಗಳು. ಇಲ್ಲಿ ಅನೇಕ ಶಿಲ್ಪಗಳಿಂದ ಕೂಡಿದ ದೇವಾಲಯಗಳಿವೆ. ದಕ್ಷಿಣಕ್ಕೆ 5 ಕಿಮೀ ದೂರದಲ್ಲಿ ನಿಸರ್ಗದ ಮಡಿಲಲ್ಲಿ ಜಾಗೃತ ದೇವತೆಯಾದ ಬನಶಂಕರಿಯ ಗುಡಿ ಇದೆ. ಪೂರ್ವಕ್ಕೆ 16 ಕಿಮೀ ಅಂತರದಲ್ಲಿ ಮಹಾಕೂಟೇಶ್ವರನ ದೇವಸ್ಥಾನವಿರುವ ಮಹಾಕೂಟವಿದೆ. ಇವೆರಡರ ನಡುವೆ ವೀರಶೈವ ಧರ್ಮಗುರುಗಳಿಗೆ ವಿದ್ಯಾಕೇಂದ್ರವಾದ ಶಿವಯೋಗ ಮಂದಿರವಿದೆ.

ಅಖಂಡ ಬಂಡೆಗಳಲ್ಲಿ ನಿರ್ಮಿಸಲಾಗಿರುವ ನಾಲ್ಕು ಗುಹಾಲಯಗಳು ಮೇಣ (ಮೇಗಣ) ಬಸ್ತಿಗಳೆಂದು ಪ್ರಸಿದ್ಧವಾಗಿವೆ. ಈ ಗುಹಾಲಯಗಳಲ್ಲಿ ಎರಡು ವೈಷ್ಣವ, ಒಂದು ಶೈವ ಇನ್ನೊಂದು ಜೈನಸಂಪ್ರದಾಯಕ್ಕೆ ಸೇರಿದವು. ಎರಡನೆಯ ಮತ್ತು ಮೂರನೆಯ ಗುಹೆಗಳ ನಡುವೆ ಒಂದು ತೀರ ಚಿಕ್ಕದಾದ ನೈಸರ್ಗಿಕ ಗುಹೆ ಇದೆ. ಅಷ್ಟಭಯ ಚಿತ್ರಗಳಿಂದ ಆವೃತವಾದ ಬೋಧಿಸತ್ತ್ವ ಪದ್ಮಪಾಣಿಯ ಉಬ್ಬುಶಿಲ್ಪವಿದೆ. ಶೈವ ಮತ್ತು ವೈಷ್ಣವ ಗುಹಾದೇವಾಲಯಗಳು ಸ್ಥೂಲವಾಗಿ ಒಂದೇ ರೀತಿಯವು. ಪ್ರತಿಯೊಂದು ದೇವಾಲಯದ ಮುಂದೆಯೂ ಆಯತಾಕಾರದ ಮೊಗಸಾಲೆಯೂ ವಿಶಾಲ ಸಭಾಮಂಟಪವೂ ಗರ್ಭಗೃಹವೂ ಇವೆ. ಶೈವಾಲಯದಲ್ಲಿ ಮೊಗಸಾಲೆಯ ಮುಂದೆ ಎಡಬದಿಗೆ ಪೂರ್ವಾಭಿಮುಖವಾದ ಒಂದು ಕೋಣೆ ಇದೆ. ಮೂರನೆಯ ಆಲಯ ಉಳಿದವಕ್ಕಿಂತ ದೊಡ್ಡದು. ಇವುಗಳ ಕಂಬಗಳು ವಿವಿಧ ಶೈಲಿಯವು. ಸಭಾಮಂಟಪದ ಪ್ರವೇಶದ್ವಾರ ಅಲಂಕೃತವಾಗಿದೆ. ಗರ್ಭಗುಡಿಯ ಬಾಗಿಲು ಚೌಕಟ್ಟು ಸ್ವಲ್ಪ ಮಟ್ಟಿಗೆ ಹೀಗೆಯೇ ಇದೆ. ಶೈವಾಲಯದ ಮೊಗಸಾಲೆಯ ಮುಂಬದಿಯ ಕಂಬಗಳನ್ನು ಆನೆಯ ತಲೆಯ ಮೇಲಿಟ್ಟಂತೆ ತೋರಿಸಲಾಗಿದೆ. ಎಲ್ಲ ದೇವಾಲಯಗಳಲ್ಲೂ ಅಧಿಷ್ಠಾನದ ಮುಂಬದಿಯಲ್ಲಿ ನಾನಾ ಭಂಗಿಗಳಲ್ಲಿರುವ ಕುಬ್ಜಗಣಗಳ ಸಾಲುಚಿತ್ತವನ್ನು ಕಾಣಬಹುದು.

ಶೈವಾಲಯದ ಹೊರಾಂಗಣದ ಎರಡು ಬದಿಗಳಲ್ಲಿ ಎತ್ತರದ ಶೈವದ್ವಾರ ಪಾಲಕರು, ಮುಂದಿನ ಎರಡು ಕೋಣೆಯ ಒಳಪಕ್ಕಕ್ಕೆ ಕಡಿದಾದ ಬಂಡೆಯ ಮೇಲೆ ಕೆತ್ತಿದ, ಸಂತೋಷದಿಂದ ಕುಣಿಯುತ್ತಿರುವ ದ್ವಿಭುಜ ಗಣೇಶ, ಸಂಧ್ಯಾಕಾಂಡದ ನೃತ್ಯಭಂಗಿಯಲ್ಲಿರುವ ನಟರಾಜ, ಕೋಣೆಯೊಳಗೆ ದ್ವಿಭುಜ ಗಣೇಶ, ಮಹಿಷಮರ್ಧಿನಿ ಮತ್ತು ಕಾರ್ತಿಕೇಯನ ಉಬ್ಬುಶಿಲ್ಪಗಳಿವೆ. ಹೊರಾಂಗಣದ ಪೂರ್ವದ ಗೋಡೆಯಲ್ಲಿ ಹರಿಹರನ ಮತ್ತು ಪಶ್ಚಿಮದ ಗೋಡೆಯಲ್ಲಿ ಅರ್ಧನಾರೀಶ್ವರನ ಶಿಲ್ಪಗಳಿವೆ. ಜಂತಿಯ ಮೇಲಿನ ಶಿಲ್ಪಗಳು ಗಿರಿಜಾ ಕಲ್ಯಾಣ ಮತ್ತು ಗಜಲಕ್ಷಮಿ, ಅಂಡಾಕಾರದ ಪೀಠದ ಮೇಲೆ ಲಿಂಗದ ಛತ್ತಿನಲ್ಲಿ ನಾಗರಾಜ ಮತ್ತು ವಿದ್ಯಾಧರ ದಂಪತಿಗಳ ಶಿಲ್ಪಗಳನ್ನು ನೋಡಬಹುದು. ಕಂಬಗಳ ಮೇಲೆ ಗರುಡ ಪ್ರಹ್ಲಾದ ಸಹಿತ ನರಸಿಂಹ, ಶಿವಲಿಂಗ ಪೂಜಾನಿರತನಾದ ಯೋಗಿ, ಪ್ರಿಯ ಪ್ರೇಯಸಿ ಮುಂತಾದ ಚಿತ್ರಗಳಿವೆ. ಗರ್ಭಗುಡಿಯಲ್ಲಿ ಲಿಂಗವಿದೆ.

ಎರಡನೆಯ ಆಲಯದ ಗರ್ಭಗುಡಿಯಲ್ಲಿ ಮೂರ್ತಿಯಿಲ್ಲ. ಹೊರಗೆ ದ್ವಾರಪಾಲಕ ವಿಗ್ರಹಗಳೂ ಮೊಗಸಾಲೆಯ ಪೂರ್ವಪಶ್ಚಿಮ ಗೋಡೆಗಳಲ್ಲಿ ಭೂವರಾಹ ಮತ್ತು ತ್ರಿವಿಕ್ರಮ ಮೂರ್ತಿಗಳೂ ಇವೆ. ಇವುಗಳ ಮೇಲೆ ಗರುಡವಾಹನನಾದ ವಿಷ್ಣು ಮತ್ತು ದಶಭುಜ ನಟರಾಜನ ಉಬ್ಬುಶಿಲ್ಪಗಳಿವೆ. ಜಂತಿಯ ಮೇಲೆ ಅನಂತಶಯನ, ಬ್ರಹ್ಮ, ವಿಷ್ಣು, ಶಿವ, ಅಷ್ಟದಿಕ್ಪಾಲಕರು, ಗಜಲಕ್ಷ್ಮಿ, ಸಮುದ್ರಮಂಥನ, ಕೃಷ್ಣಲೀಲೆ ಮುಂತಾದ ಚಿತ್ರಗಳಿವೆ. ಛತ್ತಿನಲ್ಲಿ ಹಲವು ರೇಖಾಚಿತ್ರಗಳನ್ನೂ ಗರುಡವಾಹನ ವಿಷ್ಣವನ್ನೂ ರೂಪಿಸಲಾಗಿದೆ. ಸಭಾಮಂಟಪದ ಕಂಬಗಳ ಮೇಲೆ ಶಿವಪಾರ್ವತಿ, ಲಕುಲೀಶ, ಕಾರ್ತಿಕೇಯ, ದುರ್ಗಾ, ಸಾವಿತ್ರಿ, ಸರಸ್ವತಿ ಮತ್ತು ಬ್ರಹ್ಮರನ್ನು ಬಿಡಿಸಲಾಗಿದೆ.

ಈ ಗುಹಾಲಯಗಳ ಪೈಕಿ ಮೂರನೆಯದು ಅತ್ಯಂತ ದೊಡ್ಡದು. ಮೊಗಸಾಲೆಯ ಹೊರಪಕ್ಕದಲ್ಲಿ ಅಷ್ಟಭುಜಸ್ವಾಮಿ ಮತ್ತು ತ್ರಿವಿಕ್ರಮನ ಮೂರ್ತಿಗಳಿವೆ. ಒಳಗೆ ಅನಂತನ ಮೇಲೆ ವಿಷ್ಣು, ಭೂವರಾಹ, ಹರಿಹರ, ನರಸಿಂಹ ಇವರ ಶಿಲ್ಪಗಳಿವೆ. ಜಂತಿಯ ಮೇಲೆ ಬ್ರಹ್ಮ ಶಿವ, ವಿಷ್ಣು ಮುಂತಾದ ಮೂರ್ತಿಗಳು ಹಾಗೂ ಹಲವು ಪುರಾಣದೃಶ್ಯಗಳ ಚಿತ್ರಗಳ ಪಟ್ಟಿಕೆಗಳಿವೆ. ಅಲ್ಲದೆ ಅಡ್ಡ ಛತ್ತಿನ ಮೇಲೆ ಇನ್ನೂ ಹಲವು ಚಿತ್ರಗಳಿವೆ. ಕಂಬಗಳೂ ಶಿಲ್ಪಗಳಿಂದ ಕೂಡಿವೆ. ಮೊಗಸಾಲೆಯ ಕಪೋತದ ನಡುವೆ ಗರ್ಭಗುಡಿಯ ಎದುರಿಗೆ ಗರುಡನನ್ನು ಶಿಲ್ಪಿಸಲಾಗಿದೆ. ಸಭಾಂಗಣದ ಛತ್ತಿನಲ್ಲೂ ಶಿಲ್ಪಗಳಿವೆ. ಗರ್ಭಗುಡಿಯಲ್ಲಿ ಮೂರ್ತಿಯಿಲ್ಲ. ಈ ಗುಹಾಲಯದಲ್ಲಿ ವರ್ಣಚಿತ್ರಗಳೂ ಇವೆ.

ನಾಲ್ಕನೆಯದು ಜೈನಾಲಯ, ಮೊಗಸಾಲೆ, ಅಂಕಣ ಮತ್ತು ಗರ್ಭಗೃಹಗಳಿವೆ. ಅಂಕರಣದ ಪ್ರವೇಶದ್ವಾರದಲ್ಲಿ ಎರಡು ಕಂಬಗಳಿವೆ. ಈ ದ್ವಾರದ ಚೌಕಟ್ಟಿನಲ್ಲಿ ವಿವಿಧ ಶಾಖೆಗಳ ಅಲಂಕರಣವಿದೆ. ಮೊಗಸಾಲೆಯ ಮುಂದಿನ ಕಪೋತದ ನಡುವೆ ಕುಬ್ಜನ ಉಬ್ಬುಶಿಲ್ಪವನ್ನು ಬಿಡಿಸಲಾಗಿದೆ. ಛತ್ತಿನಲ್ಲಿ ಗಂಧರ್ವ ದಂಪತಿಗಳ ಮುಂದೆ ಎಡಗಡೆಗೆ ತೀರ್ಥಂಕರರ ಚಿತ್ರ ಇವೆ. ಮೊಗಸಾಲೆಯೊಳಗೆ ಎದುರು ಬದುರಾಗಿ ಗೋಡೆಗಳ ಮೇಲೆ ಬಾಹುಬಲಿ ಮತ್ತು ಯಕ್ಷ ಯಕ್ಷಿಯರಿಂದ ಕೂಡಿದ ಸುಪಾಶ್ರ್ವನಾಥನ ಮೂರ್ತಿಗಳಿವೆ. ಕಂಬಗಳ ಮೇಲೆ ತೀರ್ಥಂಕರರು, ಜಿನಬಿಂಬಗಳು ಮತ್ತು ಯಕ್ಷ ಯಕ್ಷಿಯರನ್ನು ಬಿಡಿಸಲಾಗಿದೆ. ಅಂಕಣದ ಎದುರು ಬದುರು ಗೋಡೆಗಳ ಮೇಲೆ ಮಹಾವೀರ ತೀರ್ಥಂಕರ ಹಾಗೂ ಕೆಳಗೆ ಗಜವಾಹನ ಮಾತಂಗ ಮುಂತಾದ ಮೂರ್ತಿಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ಪಕ್ಕಗಳಲ್ಲೂ ಮೂರ್ತಿಗಳನ್ನು ಕಡೆಯಲಾಗಿದೆ. ಗರ್ಭಗುಡಿಯಲ್ಲಿ ಹಿಂಬದಿಯ ಗೋಡೆಯ ಮೇಲೆ ಸಿಂಹಪೀಠಸ್ಥ ಮಹಾವೀರನ ಮೂರ್ತಿಯನ್ನು ಕೆತ್ತಲಾಗಿದೆ.

ಉತ್ತರದ ಗುಡ್ಡದ ಮೇಲೆ ನಿರ್ಮಿಸಲಾಗಿರುವ ದೇವಾಲಯಗಳು ಮಾಲೆಗಿತ್ತಿ, ಕೆಳಗಿನ ಶಿವಾಲಯ ಮತ್ತು ಮೇಲಿನ ಶಿವಾಲಯ. ಕೆಳಗಿನ ಶಿವಾಲಯದಲ್ಲಿ ದ್ರಾವಿಡ ಶೈಲಿಯ ಶಿಖರದಿಂದ ಕೂಡಿದ ಗರ್ಭಗುಡಿ ಮಾತ್ರ ಉಳಿದಿದೆ. ಮೇಲಿನ ಶಿವಾಲಯದ ಹಿಂಭಾಗದಲ್ಲಿ ಪ್ರದಕ್ಷಿಣ ಪಥದಿಂದ ಕೂಡಿದ ಗರ್ಭಗುಡಿ, ಮುಂಭಾಗದಲ್ಲಿ ಸಭಾಮಂಟಪ, ಮುಂದೆ ಮುಖಮಂಟಪ, ಗರ್ಭಗುಡಿಯ ಮೇಲೆ ನಾಗರಶೈಲಿಯ ಶಿಖರ ಇವೆ. ಗರ್ಭಗುಡಿಯಲ್ಲಿ ಮೂರ್ತಿ ಉಳಿದಿಲ್ಲ. ಇದು ಮೂಲತಃ ವೈಷ್ಣವ ದೇವಾಲಯವಾಗಿದ್ದಿರಬಹುದೆನ್ನಲಾಗಿದೆ. ಮಾಲೆಗಿತ್ತಿ ಶಿವಾಲಯದಲ್ಲಿ ಗರ್ಭಗುಡಿ, ಸಭಾಮಂಟಪ ಮತ್ತು ಮುಖಮಂಟಪಗಳಿವೆ. ಶಿಖರ ದ್ರಾವಿಡಶೈಲಿಯದು. ಈಗಿನ ಊರಿನ ಒಳಗೆ ಜಂಬುಲಿಂಗ ದೇವಾಲಯವಿದೆ. ಇದು ಮೊದಲು ಬ್ರಹ್ಮ, ವಿಷ್ಣು, ಮಹೇಶ್ವರ ದೇವಾಲಯವಾಗಿತ್ತೆಂದು ಹೇಳಲಾಗಿದೆ. ಇದುವರೆಗೆ ತಿಳಿದರುವಂತೆ ಇದೇ ಬಹುಶಃ ಕರ್ನಾಟಕದ ಅತ್ಯಂತ ಪ್ರಾಚೀನ ತ್ರಿಕೂಟಾಚಲ ಮಾದರಿಯ ದೇವಾಲಯ. ಕೆರೆಯ ದಕ್ಷಿಣದ ದಡದ ಮೇಲೆ ಸುಮಾರು 10-12ನೆಯ ಶತಮಾನದ ಎರಡು ದೇವಾಲಯಗಳಿವೆ. ಪಶ್ಚಿಮ ದಂಡೆಯ ಮೇಲೆ ಇರುವ ದೇವಾಲಯ ಕಲ್ಯಾಣ ಚಾಳುಕ್ಯ ಶೈಲಿಯದು. ಇದು ಪಾಳುಬಿದ್ದಿದೆ. ಇದರ ಬಳಿಯಲ್ಲಿ ದತ್ತಾತ್ರೇಯ ದೇವಾಲಯವೂ ಸ್ವಲ್ಪ ದೂರಕ್ಕೆ ಮಲ್ಲಿಕಾರ್ಜುನ ಮತ್ತು ವಿರೂಪಾಕ್ಷ ದೇವಾಲಯಗಳೂ ಇವೆ. ಮಲ್ಲಿಕಾರ್ಜುನ ದೇವಾಲಯದ ಬಳಿ ಪ್ರಸನ್ನ ವೆಂಕಟದಾಸರ ಕಟ್ಟೆಯಿದೆ. ಇದು 17ನೆಯ ಶತಮಾನದ್ದು. ಗುಹಾದೇವಾಲಯಗಳ ಬಳಿ ಹೈದರ್ ಟಿಪ್ಪುಗಳ ಕಾಲದ ಒಂದು ಗುಂಬಜ್ó ಇದೆ. ಬಾದಾಮಿಯ ಪ್ರದೇಶದಲ್ಲಿ ಹಲವಾರು ಶಾಸನಗಳಿವೆ. ಬಾದಾಮಿಯಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣ ಶಾಖೆಯ ಒಂದು ಪ್ರಾಚ್ಯವಸ್ತು ಸಂಗ್ರಹಾಲಯ ಸ್ಥಾಪಿತವಾಗಿದೆ.
	(ವಿ.ಎಸ್.ಬಿಎಎನ್.; ಆರ್.ಎಸ್.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ